Friday, March 30, 2007

ಸುಬ್ಬಣ್ಣ

ನಮ್ಮ ಮಣ್ಣಿನ ಧಾರಾವಾಹಿ ಹೇಗಿರಬೇಕು ಎಂಬುದಕ್ಕೆ ಇನ್ನೊಂದು ಉದಾಹರಣೆಯಂತಿದೆ ಶೇಷಾದ್ರಿಯವರ 'ಸುಬ್ಬಣ್ಣ'. ಮಾಸ್ತಿಯವರ ಕತೆಯಂತೆಯೇ ಶುಭ್ರ, ಸರಳ, ಸುಂದರವಾಗಿರುವ ಈ ಧಾರಾವಾಹಿ ಚಂದನದಲ್ಲಿ ಪ್ರತಿ ರಾತ್ರಿ ೮.೩೦ಕ್ಕೆ ಪ್ರಸಾರವಾಗುತ್ತಿದೆ. ಹಿಂದೆ ಕೆಲವು ಗೋಳಿನ ಮೆಗಾ ಧಾರಾವಾಹಿಯಲ್ಲಿ ನಮ್ಮನ್ನು ಗೋಳು ಹೊಯ್ದುಕೊಂಡಿದ್ದ ಹಲವು ನಟರು ಇದರಲ್ಲಿ ಲವಲವಿಕೆಯಿಂದ ಅಭಿನಯಿಸಿದ್ದು ನೋಡಿದರೆ ಶೇಷಾದ್ರಿಯವರ ಪ್ರತಿಭೆ ತಿಳಿಯುತ್ತದೆ.

ಒಮ್ಮೆ ಸುಚೇಂದ್ರ ಪ್ರಸಾದರೊಂದಿಗೆ ಮಾತಿಗೆ ಕುಳಿತಿದ್ದಾಗ ಗೆಳೆಯ ವಿಕ್ರಾಂತ್ "ನಿಮ್ಮ ಮಾತಿನ ಓಘ್ ಸ್ವಲ್ಪ ಹೆಚ್ಚೆ ಎನಿಸುವಷ್ಟು ವೇಗವಾಗಿದೆ, ಅದನ್ನ ಸ್ವಲ್ಪ ಕಡಿಮೆ ಮಾಡಿಕೊಳ್ಳಬೇಕು" ಎಂದಿದ್ದಾಗ, ಸುಚೇಂದ್ರ "ನಾನು ಮಾತನಾಡುವುದೇ ಹಾಗೆ, ನಿಧಾನವಾಗಿ ಆಡುವ ಮಾತನ್ನು ಕೇಳಿ, ಕೇಳಿ ನಿಮ್ಮ ಕಿವಿಗೆ ಅಭ್ಯಾಸವಾಗಿ ಹೋಗಿದೆ. ನಾನು ನನ್ನ ಶೈಲಿಯನ್ನು ಬದಲಾಯಿಸಲಾರೆ" ಎಂದಿದ್ದರು. ಆದರೆ ಸುಬ್ಬಣ್ಣ ಪಾತ್ರಧಾರಿಯಾಗಿ ಅವರ ಸಂಭಾಷಣೆಯ ಶೈಲಿ ಹಿಂದಿಗಿಂತ ಭಿನ್ನವೂ, ಪಾತ್ರಕ್ಕೆ ತಕ್ಕುದಾಗಿಯೂ ಇದೆ. ಈ ಬದಲಾವಣೆ ಸ್ವಾಗತಾರ್ಹ.

ಗೊಬ್ಬರದ ಗುಂಡಿಯಾಗಿ ಹೋಗಿರುವ ಕನ್ನಡ ಕಾರ್ಯಕ್ರಮಗಳ ನಡುವೆ ಇಂಥಹ ನಿರ್ಮಲತೆಯನ್ನು ತಂದುಕೊಟ್ಟದ್ದಕ್ಕೆ ಶೇಷಾದ್ರಿಯವರಿಗೆ ಅಭಿನಂದನೆಗಳು.